ಭಾರತದ ಧಾರ್ಮಿಕ ಪುನರುಜ್ಜೀವನದ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಸಂಸ್ಥೆಗಳಲ್ಲಿ ಒಂದು. ಇದರ ಸಂಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಪಂಜಾಬಿನ ಉಜ್ಜಲ, ಪ್ರತಿಭಾವಂತ ಯತಿಗಳು (೧೮೨೪-೮೩). ವೈದಿಕಧರ್ಮವೇ ನಿಜವಾದ ನಿಷ್ಠೆಯೆಂದು ಅವರು ಗ್ರಹಿಸಿ ಅದರ ಪುನರುಜ್ಜೀವನಕ್ಕೆಂದು ಆರ್ಯಸಮಾಜದಲ್ಲಿ ೧೮೭೫ ಏಪ್ರಿಲ್ ೧೦ರಂದು ಮುಂಬಯಿ ನಗರದಲ್ಲಿ ವ್ಯವಸ್ಥೆ ಮಾಡಿದರು. ಎರಡು ವರ್ಷಗಳ ಅನಂತರ ಲಾಹೋರದಲ್ಲಿ ಒಂದು ಶಾಖೆ ಪ್ರವರ್ತಿತವಾಯಿತು. ಕಾಲಕ್ರಮದಲ್ಲಿ ಭಾರತದ ಎಲ್ಲ ನಗರಗಳಲ್ಲೂ ಆರ್ಯಸಮಾಜದ ಚಳವಳಿ ಬಲಗೊಂಡಿತು. ಆದರೆ ಪಂಜಾಬ್ ಅದರ ಕೇಂದ್ರ ಸ್ವರೂಪವಾಗಿ ಉಳಿದು ಕಾಂಗಡಿ, ಬೃಂದಾವನ, ಜ್ವಾಲಾಪುರಗಳಲ್ಲಿನ ಗುರುಕುಲಗಳಿಂದ ಅದರ ಪ್ರಶಸ್ತಿ ಹೆಚ್ಚಿತು. ಮಹರ್ಷಿ ದಯಾನಂದ ಸರಸ್ವತಿ ತಮ್ಮ ಜೀವಮಾನಪರ್ಯಂತವೂ ಅದರ ಪ್ರಾಣವಾಗಿ ಉಳಿದರು. ಮುಂದೆ ಶ್ರದ್ಧಾನಂದ, ಲಾಲಾ ಲಜಪತರಾಯ್, ಗಂಗಾಪ್ರಸಾದ ಉಪಾಧ್ಯಾಯ, ಲಾಲಾ ಹಂಸರಾಜ, ಗುರುದತ್ತ ಮೊದಲಾದವರ ಬೆಂಬಲದಿಂದ ಈ ಸಂಸ್ಥೆ ಬೆಳೆಯಿತು.

ಆರ್ಯಸಮಾಜ ವ್ಯವಸ್ಥೆಗೊಂಡಾಗ ಈ ಪ್ರಮುಖ ವಿಧಿಗಳು ಅದರ ಅಂಗವಾಗಿ ಮೈದಳೆದುವು. ಸರ್ವಜನರ ಪ್ರಯೋಜನಕ್ಕೆಂದೇ ಈ ಸಮಾಜ ವ್ಯವಸ್ಥಾಪಿತವಾಯಿತು. ಮನುಷ್ಯ ಜೀವನದಲ್ಲಿ ಶೀಲ, ಧರ್ಮ, ಉದ್ಯಮ ಇವುಗಳಿಗೆ ಸಂಬಂಧಿಸಿದ ಎಲ್ಲ ವಿವರಗಳಲ್ಲಿಯೂ ವೇದವೇ ಮುಖ್ಯ ಪ್ರಮಾಣ. ಶತಪಥಾದಿ ಬ್ರಾಹ್ಮಣಗಳೂ ಶಿಕ್ಷಾದಿ ಷಡಂಗಗಳೂ ನಾಲ್ಕು ಉಪವೇದಗಳೂ ಷಡ್ದರ್ಶನಗಳೂ ವೈದಿಕ ಶಾಖೆಗಳೂ ವೇದಪ್ರಾಮಾಣ್ಯದ ಪರಿಧಿಯಲ್ಲೇ ಸೇರುತ್ತವೆ. ಜಗತ್ತಿನ ಪ್ರತಿ ರಾಷ್ಟ್ರದ ಮುಖ್ಯನಗರದಲ್ಲೂ ಒಂದೊಂದು ಶಾಖೆಯನ್ನು ವ್ಯವಸ್ಥೆ ಮಾಡಬೇಕು.

ಶೀಲವಂತನಾದ ಯಾವ ಮನುಷ್ಯನಾದರೂ ಸಮಾಜದ ಸದಸ್ಯನಾಗಬಹುದು. ಸಮಾಜದ ಸಂನ್ಯಾಸಿ ಸದಸ್ಯರು ತಂತಮ್ಮ ಸಂಸಾರ ನಿರ್ವಹಣೆಗೆ ವ್ಯವಸ್ಥೆಮಾಡಿ ಉಳಿದ ಕಾಲವನ್ನೂ ಶಕ್ತಿಯನ್ನೂ ಸಮಾಜಕ್ಕೆ ಉತ್ಸಾಹದಿಂದ ಸಮರ್ಪಿಸಬೇಕು. ಸಮಾಜ ವಾರಕ್ಕೊಮ್ಮೆ ಸಭೆ ಸೇರತಕ್ಕದ್ದು. ಪ್ರತಿಯೊಬ್ಬ ಸದಸ್ಯನೂ ತನ್ನ ಮಾಸಿಕ ಉತ್ಪಾದನೆಯಲ್ಲಿ ಕನಿಷ್ಠಪಕ್ಷ ನೂರಕ್ಕೆ ಒಂದರಂತೆ ಸಮಾಜಕ್ಕೆ ಕೊಡಬೇಕು. ಹೀಗೆ ಬಂದ ಹಣದಿಂದ ಸಮಾಜ ತನ್ನ ಮುಖಪತ್ರಿಕೆಯನ್ನೂ ಶಾಲೆಯನ್ನೂ (ಆರ್ಯವಿದ್ಯಾಲಯ) ನಡೆಸತಕ್ಕದ್ದು. ಸದಸ್ಯರು ಏಕದೇವವಾದಿಗಳು; ದೇವರು ನಿರಾಕಾರ, ಸರ್ವಶಕ್ತ, ಅಜಾತ, ಅನಂತ, ಅವಿಕಾರ್ಯ, ಅದ್ವಿತೀಯ, ದಯಾಳು, ಜಗನ್ನಿಯಾಮಕ, ಸ್ವತಂತ್ರ ಪರಿಶುದ್ಧ, ಚತುರ್ವರ್ಗಫಲದಾಯಕ, ಮಾತಾಪಿತೃಸ್ವರೂಪ, ಅವನೊಬ್ಬನೇ ಪುಜಾರ್ಹ. ಸ್ತುತಿಯಿಂದ, ಪ್ರಾರ್ಥನೆಯಿಂದ, ಭಕ್ತಿಯಿಂದ ಅವನನ್ನು ಆರಾಧಿಸಬೇಕು. ಆರ್ಯಸಮಾಜದವರು ವಿಗ್ರಹಾರಾಧನೆಯನ್ನು ಅನುಮೋದಿಸುವುದಿಲ್ಲ. ನಿರಾಕಾರನಾದ ಭಗವಂತನನ್ನೇ ಅವರು ನ ಸತ್ಯ ಪ್ರತಿಮಾ ಭವತಿ-ಎನ್ನುವ ವೇದವಾಕ್ಯಕ್ಕೆ ವಿಷಯವನ್ನಾಗಿ ಗ್ರಹಿಸುತ್ತಾರೆ. ವೈದಿಕಸಂಸ್ಕಾರಗಳಲ್ಲಿ ಅವರಿಗೆ ಅಚಲವಾದ ಶ್ರದ್ಧೆ. ಗರ್ಭಾಧಾನದಿಂದ ಹಿಡಿದು ಅಂತ್ಯೇಷ್ಟಿಯವರೆಗೆ ಎಲ್ಲ ಸಂಸ್ಕಾರಗಳನ್ನೂ ವೈದಿಕಮಂತ್ರಗಳಿಂದಲೇ ನಡೆಸಬೇಕೆಂದು ಅವರ ಆಗ್ರಹ. ವೇದಗಳಲ್ಲಿ ಮತ್ತು ಇತರ ಆರ್ಷಗ್ರಂಥಗಳಲ್ಲಿ ಅಡಗಿರುವ ತತ್ತ್ವವನ್ನು ಎಲ್ಲ ಶಾಲೆಗಳಲ್ಲೂ ಬಾಲಕ-ಬಾಲಕಿಯರಿಗೆ ಕಲಿಸಬೇಕೆಂದು ಅವರ ಕಾತರ. ಪ್ರಾಪಂಚಿಕ ವ್ಯವಹಾರದಲ್ಲೂ ಪಾರಮಾರ್ಥಿಕ ವಿಚಾರಗಳಲ್ಲೂ ಅಭ್ಯುದಯವನ್ನು ಸಾಧಿಸುವುದು ಆರ್ಯಸಮಾಜದ ಉದ್ದೇಶ. ಈ ದೃಷ್ಟಿಯಿಂದ ಎಲ್ಲ ಕೆಲಸಗಳನ್ನು ಮಾಡುವಾಗಲೂ ಧಾರ್ಮಿಕ ಅಥವಾ ಆಧ್ಯಾತ್ಮಿಕ ಮನೋವೃತ್ತಿಯಿಂದಲೇ ಮಾಡಬೇಕೆಂದು ಆರ್ಯಸಮಾಜದ ವಿಧಿ. ಮೌಢ್ಯವನ್ನು ತೊಲಗಿಸಿ ಜನಕ್ಕೆ ಜ್ಞಾನದಾನ ಮಾಡಬೇಕೆಂಬ ಹಂಬಲದೊಂದಿಗೆ ಜನ ಸತ್ಯವನ್ನೇ ನಿಷ್ಠುರವಾಗಿ ಅನ್ವೇಷಣೆ ಮಾಡಬೇಕೆಂದೂ ಅಸತ್ಯವನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕೆಂದೂ ದಯಾನಂದರು ಸಾರಿ ಅದನ್ನು ಆರ್ಯಸಮಾಜದ ವಿಧಿಗಳಲ್ಲಿ ಸೇರಿಸಿದರು. ಈ ನೆಲೆಯಲ್ಲಿ ಅವರು ಸಂಪ್ರದಾಯದಿಂದ ಬಂದ ಪುರಾಣಗಳನ್ನೂ, ತಂತ್ರಗಳನ್ನೂ ಅಸಾಧುವೆಂದು ತಿರಸ್ಕರಿಸಿದರು. ಪುರಾಣಗಳೆಲ್ಲವೂ ಕಟ್ಟುಕಥೆ, ಪುರಾಣಕಾರರು ಧೂರ್ತರು ಎಂದು ಅವರ ವಿಶ್ವಾಸ. ಅವರ ದೃಷ್ಟಿಯಲ್ಲಿ ಶುದ್ಧವೈದಿಕ ಸಿದ್ಧಾಂತವೇ ಪ್ರಮಾಣ, ಉಳಿದುದೆಲ್ಲ ಅಲ್ಲ.

ಈ ಸಮಾಜಧೋರಣೆಯಲ್ಲಿ ಸಾಮಾಜಿಕದೃಷ್ಟಿ ದೃಢವಾಗಿ ಬೇರೂರಿ ಬಂದಿತು. ಯಾವ ವ್ಯಕ್ತಿಯೂ ತನ್ನ ವೈಯಕ್ತಿಕ ಪ್ರಗತಿಯನ್ನೇ ಪುರುಷಾರ್ಥವೆಂದು ಬಗೆಯದೆ, ಎಲ್ಲರ ಅಭ್ಯುದಯದ ಸಾಧನೆಯಿಂದ ತನ್ನ ಸಮಾಧಾನವನ್ನು ಪಡೆದುಕೊಳ್ಳಬೇಕು ಎನ್ನುವ ವಿಧಿಯಿದೆ. ಸರ್ವರ ಹಿತ, ಸುಖಗಳಿಗೆ ನೆರವಾಗುವಂಥ ಸಾಂಘಿಕ ಕಟ್ಟಳೆಗಳನ್ನು ಅವಶ್ಯವಾಗಿ ಅನುಸರಿಸಬೇಕು. ಆರ್ಯಸಮಾಜ ಇಡೀ ಮಾನವ ಸಮಾಜದ ಭೌತಿಕ, ಸಾಮಾಜಿಕ, ಆಧ್ಯಾತ್ಮಿಕ ಪ್ರಗತಿಗೆ ಸಾಧನವಾಗಬೇಕು. ಆರ್ಯಸಮಾಜದ ಸದಸ್ಯ ಆರ್ಯನೆನಿಸಿಕೊಳ್ಳುತ್ತಾನೆ. ಆರ್ಯರೆಲ್ಲರೂ ಸಮಾನರು. ದಯಾನಂದರು ಸಮಾಜದ ಸಾಮಾನ್ಯ ಸದಸ್ಯರಾಗಿಯೇ ಉಳಿದರಲ್ಲದೆ ಅದರ ಅಧ್ಯಕ್ಷರಾಗಲು ಒಪ್ಪಲಿಲ್ಲ. ಅವರ ಭಾವಚಿತ್ರವನ್ನು ಯಾವ ಆರ್ಯಸಮಾಜದ ಭವನದಲ್ಲೂ ಹಾಕಬಾರದೆಂದು ಅವರು ಸೂಚನೆಯಿತ್ತರು. ತಾವು ಸಭಾಭವನಕ್ಕೆ ಬಂದಾಗ ನೆರೆದಿದ್ದ ಜನ ಎದ್ದುನಿಲ್ಲುವುದನ್ನೂ ನಿಷೇಧಿಸಿದರು. ಭಗವಂತನೊಬ್ಬನೇ ಸರ್ವೋತ್ತಮ. ಉಳಿದ ಯಾವುದೂ ಅವನಿಗೆ ಸಮನಾಗಲಾರದು. ಎಲ್ಲ ಜನರೂ ಸಮಾನರು ಎಂಬುದು ಅವರ ಉಪದೇಶ.

ಮೂಢನಂಬಿಕೆಗಳನ್ನು ಖಂಡಿಸುವುದರಲ್ಲಿ ಆರ್ಯಸಮಾಜ ಸಿದ್ಧವಾಯಿತು. ಸಮಾಜಸುಧಾರಣೆಯೂ ಇದರಿಂದ ಆಯಿತು. ಆ ಕಾಲಕ್ಕೆ ಬಲಗೊಳ್ಳುತ್ತಿದ್ದ ಕ್ರೈಸ್ತ ಪ್ರಚಾರಕರಿಗೆ ಆರ್ಯ ಸಮಾಜದ ಸ್ಥಾಪನೆಯಿಂದ ಆತಂಕವುಂಟಾಯಿತು. ಕ್ರೈಸ್ತರು ಹಿಂದೂಧರ್ಮದ ಹುಳುಕೆಂದು ಪುರಾಣಗಳಿಂದ ಬಲಗೊಂಡ ನಂಬಿಕೆಗಳನ್ನೂ ಕಲ್ಪನೆಗಳನ್ನೂ ಎತ್ತಿ ತೋರಿಸುತ್ತಿದ್ದರು. ಆದ್ದರಿಂದ ಅವರ ಪ್ರಚಾರಕ್ಕೆ ನೆರವಾಗುತ್ತಿತ್ತು. ಆದರೆ ದಯಾನಂದರು ಇವು ನಿಜವಾದ ಹಿಂದೂಧರ್ಮವಲ್ಲವೆಂದೂ ವೈದಿಕನಿಷ್ಠೆಯಲ್ಲಿ ಪುರಾಣಗಳು ಅಸಂಬದ್ಧವೆಂದೂ ತಾವೇ ಎತ್ತಿ ತೋರಿಸಿದುದರಿಂದ ಅವರ ಬಾಯಿಕಟ್ಟಿತು. ಮಹಮ್ಮದೀಯರ ಪ್ರಚಾರವೂ ಹೀಗೆಯೇ ಬಲಗೊಂಡಿತ್ತು. ಹಿಂದೂಗಳಾಗಿದ್ದವರು ಬಲವಂತದಿಂದ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದು ಅಂಥವರನ್ನು ಮತ್ತೆ ಹಿಂದೂ ಸಮಾಜಕ್ಕೆ ಸೇರಿಸಿಕೊಳ್ಳಲು ಯಾವ ಕ್ರಮವೂ ಇರದಿದ್ದಾಗ, ಆರ್ಯಸಮಾಜ ಶುದ್ಧೀಕರಣದ ವಿಧಿಯನ್ನು ಏರ್ಪಡಿಸಿ ಕೃತಕೃತ್ಯವಾಯಿತು. ಇದರಿಂದ ಉತ್ತರ ಭಾರತದಲ್ಲಿ ಮಹಮ್ಮದೀಯರ ಮತ್ತು ಕ್ರೈಸ್ತರ ಮತಾಂತರ ಕಾರ್ಯಗಳು ಸಾಕಷ್ಟು ಕುಂಠಿತವಾದವು. ಈ ಸಮಾಜದಿಂದ ದೇಶದಲ್ಲಿ ರಾಷ್ಟ್ರಭಾವನೆಯೂ ಬಲಗೊಂಡಿತು.

ಗುರುಕುಲಗಳಲ್ಲಿ ಆರ್ಯಸಮಾಜ ಏರ್ಪಡಿಸಿದ ವಿದ್ಯಾಭ್ಯಾಸಕ್ರಮ ಮಾದರಿಯಾಗಿತ್ತು. ಹರಿಜನೋದ್ಧಾರಕಾರ್ಯ ಹೊಸತಾಗಿದ್ದ ಆ ಕಾಲದಲ್ಲಿ ಹರಿಜನ ಬಾಲಕರು ಗುರುಕುಲಗಳಲ್ಲಿ ವ್ಯಾಸಂಗಮಾಡುತ್ತಿದ್ದರು. ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗಿನ ವಿವಿಧಬಗೆಯ ಶಾಲೆಗಳು ಸಮಾಜದ ಹೆಸರಿನಲ್ಲಿ ನಡೆಯುತ್ತಿವೆ. ಅನಾಥಾಲಯಗಳು, ವನಿತಾಶ್ರಮಗಳು, ಶಾಲೆಗಳು, ಚಿಕಿತ್ಸಾಲಯಗಳು, ಅತಿಥಿಭವನಗಳು, ವ್ಯಾಯಾಮಶಾಲೆಗಳು, ಮುದ್ರಣಾಲಯ ಗಳು, ಪುಸ್ತಕ ಭಂಡಾರಗಳು, ಪತ್ರಿಕೆಗಳು-ಬಹು ಸಂಖ್ಯೆಯಲ್ಲಿ ಸಮಾಜದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿವೆ. ಆರ್ಯಸಮಾಜದ ಸಾಹಿತ್ಯವೂ ವಿಸ್ತಾರವಾಗಿ ಬೆಳೆದಿದೆ. ವೇದ ವೇದಾಂಗಗಳನ್ನು ಭಾರತೀಯ ದೇಶಭಾಷೆಯಲ್ಲಿ ತಂದ ಮೊದಲ ಕೀರ್ತಿ ಸಮಾಜಕ್ಕೆ ಸೇರುತ್ತದೆ. ಇತಿಹಾಸ, ಗಣಿತ, ವಿಜ್ಞಾನ ಮೊದಲಾದುವನ್ನೂ ಸಮಾಜ ಕಡೆಗಣಿಸಿಲ್ಲ. ಮೇಲಾಗಿ ಸ್ವಾತಂತ್ರ್ಯಸಮರದಲ್ಲಿ ಭಾರತದ ಇತರರೊಂದಿಗೆ ಸಮಾಜ ಕೈಗೆ ಕೈಕೊಟ್ಟು ಹೊಡೆದಾಡಿದೆ. ಭಾರತದಲ್ಲಿ ಸುಮಾರು ನಾನೂರು ಸಮಾಜಗಳೂ ಹನ್ನೆರಡು ಪ್ರತಿನಿಧಿಸಭೆಗಳೂ ಇವೆ. ಹೊರದೇಶಗಳಾದ ನೆಟಾಲ್, ನೆರೋಬಿ, ಮಾರಿಷಸ್, ಫಿಜಿ, ಸುರೀನಾಮ್ ಮೊದಲಾದ ಸ್ಥಳಗಳಲ್ಲಿ ಆರ್ಯಸಮಾಜ ವಿಸ್ತರಿಸಿದೆ. ಮೂಲತಃ ೧೦೦ ಜನ ಸದಸ್ಯರಿಂದ ಆರಂಭವಾದ ಆರ್ಯಸಮಾಜದಲ್ಲಿ ಪ್ರಪಂದಾದ್ಯಂತ ಈಗ ೩ ರಿಂದ ೪ ಮಿಲಿಯನ್ ಅನುಯಾಯಿಗಳಿದ್ದಾರೆ ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನೊಳಗೊಂಡ ಸಭೆ ದೆಹಲಿಯಲ್ಲಿದೆ. ಮೂಲತಃ ೧೦೦ ಜನ ಸದಸ್ಯರಿಂದ ಆರಂಭವಾದ ಆರ್ಯಸಮಾಜದಲ್ಲಿ ಪ್ರಪಂಚದಾದ್ಯಂತ ಈಗ ೩ ರಿಂದ ೪ ಮಿಲಿಯನ್ ಅನುಯಾಯಿಗಳಿದ್ದಾರೆ. 				        

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ